ನೀನೇನೋ ಕಂಸಮರ್ಧನ ನೆಪದಲ್ಲಿ
ಎದ್ದು ನಡೆದುಬಿಟ್ಟೆ
ನನಗ್ಯಾವ ನೆಪವಿಹುದು ಹೇಳು?
ಹೋತ್ಟೆರುವ ಮೊದಲೇ ನಿನ್ನೆದುರು
ನನ್ನ ಗಲ್ಲಕ್ಕೆ ಕೈಯೊತ್ತಿ ಕೂತು
ನಿನ್ನ ಮುರಳಿಯ ನಾದದಲಿ
ಲೀನವಾಗುವುದು ಅಭ್ಯಾಸವಾಗಿ ಬಿಟ್ಟಿತ್ತಲ್ಲಾ??
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನ ಬಿಂಬ
ಕಾಣುವುದು ನಿತ್ಯನಿರಂತರವೆಂದಿದ್ದೆ
ಯಮುನೆಯಲಿ ಮೀವಾಗ ನಿನ್ನ
ಕಳ್ಳ ನೋಟಕೆ ನಾಚಿ ಮೊಗ್ಗಾಗುವ
ನನ್ನ ಗಲ್ಲವ ಹಿಡಿದು ನೀ ಚಿವುಟಿದ
ಗಾಯದ ಕಲೆ ನಿನ್ನ ನೆನಪಿಸುವುದಾ
ತಡೆಯಲೀ ಹೇಗೇ?
ನಾ ನಿಂತಲ್ಲಿಯೇ ಧ್ಯಾನಸ್ಥಳಾಗುತ್ತೇನಂತೆ
ಮೌನದಲೇ ಮುಳುಗುತ್ತಿದ್ದೇನಂತೆ
ಅಗಾಗ ಕಣ್ಣಲ್ಲಿ ಹನಿ ಹೊಳೆಯುವುದಂತೆ
ಅಂತೆ ಕಂತೆಗಳ ನನ್ನೆಡೆಗಿನ ದೂರಿದು ನೋಡು
ಅದಕೆಲ್ಲಾ ನೀನೆ ಕಾರಣವೆಂಬ ಸತ್ಯ
ನನ್ನೊಳಗೇ ದಹಿಸಲಿ ಬಿಡು
ಚಿರವಿರಹಿ ನಾನೆಂಬ ಕಟುಸತ್ಯ
ಜಗಕೆ ತಿಳಿಯದು
ಅಮರ ಪ್ರೇಮವಂತೆ ಈ ರಾಧಾಕೃಷ್ಣ ರದು.....
Friday, May 17, 2019
Subscribe to:
Post Comments (Atom)
No comments:
Post a Comment