Friday, May 17, 2019

ನೀನೇನೋ ಕಂಸಮರ್ಧನ ನೆಪದಲ್ಲಿ
ಎದ್ದು ನಡೆದುಬಿಟ್ಟೆ
ನನಗ್ಯಾವ ನೆಪವಿಹುದು ಹೇಳು?
ಹೋತ್ಟೆರುವ ಮೊದಲೇ ನಿನ್ನೆದುರು
ನನ್ನ ಗಲ್ಲಕ್ಕೆ ಕೈಯೊತ್ತಿ ಕೂತು
ನಿನ್ನ  ಮುರಳಿಯ ನಾದದಲಿ
ಲೀನವಾಗುವುದು ಅಭ್ಯಾಸವಾಗಿ ಬಿಟ್ಟಿತ್ತಲ್ಲಾ??
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನ ಬಿಂಬ
ಕಾಣುವುದು ನಿತ್ಯನಿರಂತರವೆಂದಿದ್ದೆ
ಯಮುನೆಯಲಿ  ಮೀವಾಗ ನಿನ್ನ
ಕಳ್ಳ ನೋಟಕೆ ನಾಚಿ ಮೊಗ್ಗಾಗುವ
ನನ್ನ ಗಲ್ಲವ ಹಿಡಿದು ನೀ ಚಿವುಟಿದ
ಗಾಯದ ಕಲೆ ನಿನ್ನ ನೆನಪಿಸುವುದಾ
ತಡೆಯಲೀ ಹೇಗೇ?
ನಾ ನಿಂತಲ್ಲಿಯೇ ಧ್ಯಾನಸ್ಥಳಾಗುತ್ತೇನಂತೆ
ಮೌನದಲೇ ಮುಳುಗುತ್ತಿದ್ದೇನಂತೆ
ಅಗಾಗ ಕಣ್ಣಲ್ಲಿ ಹನಿ ಹೊಳೆಯುವುದಂತೆ
ಅಂತೆ ಕಂತೆಗಳ  ನನ್ನೆಡೆಗಿನ ದೂರಿದು ನೋಡು
ಅದಕೆಲ್ಲಾ ನೀನೆ ಕಾರಣವೆಂಬ ಸತ್ಯ
ನನ್ನೊಳಗೇ ದಹಿಸಲಿ ಬಿಡು
ಚಿರವಿರಹಿ ನಾನೆಂಬ ಕಟುಸತ್ಯ
ಜಗಕೆ ತಿಳಿಯದು
ಅಮರ ಪ್ರೇಮವಂತೆ ಈ ರಾಧಾಕೃಷ್ಣ ರದು.....


Thursday, May 2, 2019

ನೆಲಕೆ ಬಿದ್ದ ಹೂವು

(ಹಳೆಯದು)

ನೆಲಕೆ ಬಿದ್ದ ಹೂವು ನಾನು
ಅಂದವಿರದು ನನ್ನಲಿ
ಸುಗಂಧವಿರದು .ನನ್ನಲಿ

ಮುಡಿಗೆ ನಾನು ಸೇರಲಿಲ್ಲ
ದೇವರಿಗೂ ಸಲ್ಲಲಿಲ್ಲ
ತೊಟ್ಟು. ಕಳಚಿ ಬಿದ್ದೆನಲ್ಲ
ಮಣ್ಣ ಪಾಲಾದೆನಲ್ಲಾ...

ಗಾಳಿಯಲೆಗೆ ತೇಲಿ ನಾನು
ಧೂಳ ತೆರೆಗೆ ಸೇರಿ ಹಾರೆ
ಮತ್ತೆ ಬೀಳೆ ನೆಲದ ಮೇಲೆ
ಮನುಜ ಪಾದದಡಿಯ ಪಾಲೇ

ಪ್ರಕ್ರತಿ ನಿಯಮವಿದೆ ಕೇಳೆ
ನನ್ನ ಕಾಲ ಮುಗಿದಮೇಲೆ
ಹೊಸ ಹೂವಿನ ಹುಟ್ಟು ತಾನೆ
ತಿರುಗುವುದು ಕಾಲ ಚಕ್ರ
ಮರಳಿ ಎಲ್ಲ ಮಣ್ಣಿಗೇನೆ.. ಸುನೀ

ಬೆತ್ತಲ ಬಯಲು

ಬಟ್ಟ ಬಯಲೊಳಗೆ ನಿಂತಿದ್ದೇನೆ
ಸುತ್ತಲೂ ಬೆತ್ತಲ ಬೆಳಕು
ರವರವನೆ ಬೀಸುವ ಗಾಳಿ
ಮರಗಟ್ಟಿದೆ ಮನಸು ಮೈ
ಯಾರ ನಿರೀಕ್ಷೆಯ ಹಂಬಲಕೋ
ಬಾಳ ಪರೀಕ್ಷೆಯ ಘಟ್ಟಕೋ
ಭಾವನೆಗಳ ಚಟ್ಟಕೋ
ನೆನಪುಗಳ ಅಂತ್ಯಕೋ
ನಿಂತುಬಿಟ್ಟಿದೆ ಕಾಲ
ಅಲುಗಾಡದೇ
ನಿಂತಿದ್ದೇನೆ ಬಟ್ಟಬಯಲೊಳಗೆ
ಬಯಲಾಗಿಸಬಯಸಿ ಎಲ್ಲ
...ಸುನೀ

ಕರುಣೆ

ಕತ್ತಲಿಗೂ ಕರುಣೆ ಇದೆ
ನಿನ್ನ ಕಣ್ಣ ಭಾವಗಳ
ತೋರಗೊಡಿಸುವುದಿಲ್ಲ...
ಕಂಬನಿಯ ಕಾಣಗೊಡಿಸುವುದಿಲ್ಲ
ನಿನ್ನ ಬೆತ್ತಲ ಬಯಲುಗೆಡಿಸುವುದಿಲ್ಲ..
ಒಟ್ಟಿನಲಿ ನಿನ್ನ ನೋವೆಲ್ಲ ಮುಚ್ಚಿಟ್ಟು
ನಿನ್ನಿರವ ಬಚ್ಚಿಡುವುದಲ್ಲಾ
ತಾಯ ಗರ್ಭದಲ್ಲಿರುವ
ಶಿಶುವಿನಂತೆ...
ಕತ್ತಲಿಗೂ ಕರುಣೆ ಇದೆ
ತಾಯ ಹೃದಯದಂತೆ...ಸುನೀ

ಭರತನಾಟ್ಯ

ಭಾವ ರಾಗಗಳ
ತಾಳ ಲಯ ಗತಿ
ಹೆಜ್ಜೆ ಗೆಜ್ಜೆಗಳಧಿಪತಿ
ನವರಸಗಳಭಿವ್ಯಕ್ತಿ
ಇದುವೆ ನರ್ತನ ಶಕ್ತಿ.. ....ಸುನೀ