Saturday, December 29, 2012

ಉಸಿರು ನೀಡಿದ ಜೀವ ಉಸಿರು ಬಿಡುವ ಮುನ್ನ...................................




ವೃದ್ದಾಪ್ಯ, ಮುದಿತನ, ಜೀವನದ ಸಂದ್ಯಾ
ಕಾಲ- ಈ ಪದಗಳನ್ನ ಕೇಳ್ತಾ ಇದ್ರೆ ವಯಸ್ಸಾದ ಅಜ್ಜ ಅಜ್ಜಿಯರು ನೆನಪು ಕಾಡುತ್ತೆ ಮನದಲ್ಲಿ. ನಿಜ ಮುದಿತನ ತಮ್ಮ ಬಾಲ್ಯದ, ಯೌವನದ, ಹಾರಾಟ ಹೋರಾಟವನ್ನು ನೆನಪು ಮಾಡಿಕೊಂಡು, ಕೊರಗುವ ಮರುಗುವ ದಿನಗಳೇ? ಅಥವಾ ಪಡೆದದ್ದು ಕಳೆದುಕೊಂಡದ್ದರ ಲೆಕ್ಕಾಚಾರ ಮಾಡುವ ಸಮಯವೇ? ಅಥವಾ ತಾ ಮಾಡಿದ ಕೆಲಸದ ಬಗೆಗಿನ ಸಾರ್ಥಕ ಭಾವವೇ? ಏನಾದರು ಸರಿ, ವೃದ್ದಾಪ್ಯ ಎಲ್ಲರಿಗೂ ಸುಖಮಯವಲ್ಲ. ಹಾಗೆ ದುಃಖವೂ ಆಗಿರುವುದಿಲ್ಲ. ಇಂದಿನ ವೇಗದ ಬದುಕಿನಲ್ಲಿ ನಿಧಾನಗತಿಯಿಂದ ಸಾಗುವ ವೃದ್ದರ ಬದುಕು ಅಸಹನೀಯವೆಂದು ಎಷ್ಟು ಜನಕ್ಕೆ ತಿಳಿದೀತು, ಏನೋ ಗೊತ್ತಿಲ್ಲ? ನಮ್ಮನ್ನು ಹೆತ್ತು, ಸಾಕಿ, ಅಕ್ಕರೆಯ ತೋರಿ, ತನ್ನ ಹಸಿವೆಗಿಂತ ತನ್ನ ಕಂದನ ಹಸಿವೆ ದೊಡ್ಡದು ಎಂದೂ, ಎಲ್ಲಿಯೂ ಒಂದಿಷ್ಟು ಹಸಿವಿನ್ನಲಾಗಲಿ, ಅಕ್ಕರೆಯಲ್ಲಾಗಲಿ ಕಿಂಚಿತ್ತೂ ಕಡಿಮೆ ಇಲ್ಲದಂತೆ ಸಾಕಿ ನಮ್ಮ ಬದುಕಿಗೆ ಅರ್ಥ ಕಲ್ಪಿಸಿ, ನಮ್ಮ ಬದುಕು ಹಸನಾಗಿಸುವತ್ತ ಹಿರಿಯರ ಶ್ರಮ ಅಷ್ಟಿಷ್ಟಲ್ಲ. ನಮ್ಮ ಬಗೆಗೆ ಅವರ ಕಲ್ಪನೆಗಳೆಲ್ಲಾ, ನಮ್ಮ ಹಿತಚಿಂತನೆಯಲ್ಲಿಯೇ ತೊಡಗಿಹೋಗಿರುತ್ತದೆ. ತಾ ಹೆತ್ತ ಮಗಳು ಗಂಡನ ಮನೆಯಲ್ಲಿ ಹೇಗಿದ್ದಳೋ, ಏನೋ ಎಂದು ಪರಿತಪಿಸುವ ಮನ ಹಾಗೆಯೇ ಮಗನಾಗಿದ್ದರೇ, ಕೆಲಸ ಹೇಗಿದ್ದೆಯೋ, ಕೆಲಸದ ಒತ್ತಡದಲ್ಲಿದ್ದಾನೋ, ಸಂಸಾರ ಸಾಗಿಸಲು ಹಣದ ಕೊರತೆ ಕಾಡುತ್ತಿದೆಯೋ, ತನ್ನ ಬದುಕಿಗಾಗಿ ಉಳಿಸಿಟ್ಟ ಹಣವನ್ನು ಸಹ ಧಾರೆಯೆರೆದು ಬರಿಗೈ ದಾಸನಾಗಿಬಿಡುವ ಹಿರಿಯರು, ಕೊನೆಗೊಂದು ದಿನ ತಮ್ಮ ಮಕ್ಕಳೇ ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ನಮ್ಮನ್ನು ಕಡೆಗಣಿಸುವರೆಂಬ ಪರಿವೆ ಇಲ್ಲದೆ ತಮ್ಮೆಲ್ಲ ಸುಖವನ್ನ ಧಾರೆಯೆರೆದು, ಹೇಗಾದರೂ ಆಗಿರಲಿ ನಾ ಹೆತ್ತ ಮಕ್ಕಳು ಸುಖಮಯವಾಗಿರಲಿ ಎಂದು ಹಾರೈಸುತ್ತಾ, ನಮ್ಮನ್ನು ದಡ್ಡ ಮುಟ್ಟಿಸಿದ ನಂತರವೇ ಹಿರಿಯರು ನೆಮ್ಮದಿಯ ನಿಟ್ಟುಸಿರುಬಿಡುತ್ತಾರೆ.
ಆ ನಂತರದ ಅವರ ಬದುಕು ಮಾತ್ರ ಅವರಿಗೆ ಅಸಹನೀಯವಾಗಿ ಕಾಡುತ್ತಾ ಸಾಗುತ್ತದೆ. ತಮ್ಮ ಕಾಲ ಮುಗಿತು ಮಕ್ಕಳು ಚೆನ್ನಾಗಿರಲಿ ಅನ್ನೋ ಭಾವವೇ ಹೊರತು ಮತ್ತೇನ್ನನೂ ಬಯಸದ ಅವರು ತಮ್ಮ ಇಳಿ ವಯಸ್ಸಿನ ಸ್ಥಿತಿ ಶೋಚನೀಯ. ಕೆಲಸ ಮಾಡಲು ದೇಹ ದುರ್ಬಲವಾಗಿ, ಸುಮ್ಮನೆ ಕೂತು ಊಟ ಮಾಡುವ ಮನಸ್ಸಿಲ್ಲದೆ, ಏನಾದರೂ ಚಟುವಟಿಕೆಯಲ್ಲಿರಬೇಕೆಂದು ಮನಸ್ಸು ಬಯಸಿದರೂ, ಕೃಷವಾದ ದೇಹ ಅವರನ್ನು ಜರ್ಝರಿತರನ್ನಾಗಿ ಮಾಡಿಬಿಟ್ಟಿರುತ್ತದೆ. ಇದರ ನಡುವೆ ಇಳಿವಯಸ್ಸಿನಲ್ಲಿ ಒಂಟಿತನ ಕಾಡುವುದಕ್ಕೆ ಶುರುವಾಗಿಬಿಡುತ್ತದೆ, ತಾನು ಸಾಕಿ ಬೆಳೆಸಿದ ಮಕ್ಕಳು ಗಮನಿಸದಿರುವ ಭಾವ ಕಾಡುತ್ತಾ ಸಾಗುತ್ತದೆ. ಒಂದು ಬಾರಿಯೂ ಅವರ ಮನದ ಒಳಹೊಕ್ಕು ನೋಡುವ ಮನಸ್ಸಿಲ್ಲದೆ, ಮೊದಲು ಎಲ್ಲದಕ್ಕೂ ಅಮ್ಮ ಅಮ್ಮ ಎಂದು ಬರುತಿದ್ದ ಮಗ ಈಗ ಎಲ್ಲ ವಿಷಯಗಳಲ್ಲಿಯೂ ಹೆಂಡತಿಯೊಂದಿಗೆ ಹಂಚಿಕೊಳ್ಳುವ ಮಗ. ಅಪ್ಪನ ಜೊತೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದ ಮಗ ಈಗ ಕೆಲಸ ಬಿಟ್ಟು ಬಂದ ಕೂಡಲೇ ಹೆಂಡತಿಯೊಟ್ಟಿಗೆ ರೂಂ ಸೇರುವುದು. ಅದು ಇಲ್ಲದೆ ಇದ್ರೆ ಕಂಪ್ಯೂಟರ್ ಮುಂದೆ ಕುಳಿತು, ಕೆಲಸದಲ್ಲಿ ನಿರತನಾಗಿರುವಂತೆ ನಟಿಸುವುದು. ಅವನಿಗೆ ಅವನದೇ ಪ್ರಪಂಚ, ಆತನಿಗೆ ಅಪ್ಪ ಅಮ್ಮ ಯಾರು ಕಣ್ಣಿಗೆ ಕಾಣುವುದಿಲ್ಲ, ಅವರತ್ತ ಒಂದು ಪ್ರೀತಿಯ ನೋಟವನ್ನು ಸಹ ಬೀರುವಷ್ಟು ಸೌಜನ್ಯವೂ ಇಲ್ಲವಾಗಿರುತ್ತದೆ
ಅಮ್ಮನ ಒಂಟಿತನಕ್ಕೆ ಸೊಸೆಯನ್ನು ಹೊಣೆ ಮಾಡುತ್ತಾ, ಅತ್ತೆ-ಸೊಸೆಯ ಸಂಬಂಧ ಹಳಸಿದಂತ್ತಾಗಿರುತ್ತದೆ. ಮಗನ ಮೇಲಿನ ಅತಿಯಾದ ಮೋಹದಿಂದ ತಾ ಸಾಕಿದ ಮಗ ಕೈ ತಪ್ಪುವ ಭಾವ ಮನದಲ್ಲಿ ಕಾಡಿ, ಸೊಸೆಯನ್ನು ಕಂಡರೆ ವಿರಸ ಭಾವ ತಲೆದೋರಿಬಿಟ್ಟಿರುತ್ತದೆ. ನಾವು ಹಾಗಲ್ಲ ಇನ್ನು ೪೦ರ ಗಡಿ ದಾಟದೇ, ಯಾಕೋ ಒಂಟಿತನ ಕಾಡ್ತಾ ಇದೆ ಎಂದು ಪೇಚಾಡುವ, ಸಮಯ ಕಳೆಯಲು ನೂರಾರು ದಾರಿಗಳು ಇದ್ದರು ಕೂಡ ಏನೋ ಕಳೆದುಕೊಂಡವರಂತೆ ವರ್ತಿಸುವ. ಚಿಕ್ಕ ವಿಷಯಗಳನ್ನೆಲ್ಲಾ ದೊಡ್ಡದು ಮಾಡುವ ನಾವು. ನಮ್ಮ ಬಿಡುವಿನ ದಿನಗಳಲ್ಲಿ ತಂದೆ ತಾಯಿಗಳ ಬಳಿ ಹೋಗಿ ತಮಾಷೆಯಾಗಿ ಮಾತಾಡಿದ್ದಿವಾ? ಮುಖ್ಯವಾದ ಕೆಲಸಗಳಲ್ಲಿ ಅವರ ಅಭಿಪ್ರಾಯ ಕೇಳಿದ್ದೀವಾ? ನಂಗೆ ಹೀಗೆ ಅನಿಸುತ್ತಿದೆ ನಿಮ್ಮಗೆನನ್ನಿಸುತ್ತದೆ ಎಂದು ಕೇಳಿದ್ದಿವಾ? ವಾರಕ್ಕೆ ಒಂದು ಬಾರಿಯಾದರೂ ಅವರನ್ನ ಹೊರಗೆ ಕರೆದುಕೊಂಡು ಹೋಗುವಾ ಮನಸ್ಥಿತಿ ಬೆಳೆಸಿಕೊಂಡಿದ್ದೀವಾ? ಎಷ್ಟೊಂದು ಪ್ರಶ್ನಾರ್ಥಕ ಚಿಹ್ನೆಗಳು ನಮ್ಮನ್ನು ಕಾಡುತ್ತವೆ. ತಮ್ಮ ಬದುಕಿನ ಪ್ರತಿ ಕ್ಷಣವನ್ನು ನಮಗಾಗೇ ಮೀಸಲಿಟ್ಟ ನಮ್ಮ ತಂದೆ ತಾಯಿಗಾಗಿ ನಮ್ಮ ಸಮಯದಲ್ಲಿ ಕೆಲವು ಕ್ಷಣಗಳನ್ನಾದರೂ ಮೀಸಲಾಗಿಟ್ಟು, ಅವರೊಂದಿಗೆ ಒಂದಷ್ಟು ಕ್ಷಣವನ್ನು ಕಳೆಯುವಲ್ಲಿ ಸೋತಿರುವ ಭಾವ ಕಾಡುವುದಿಲ್ಲವೇ ನಮಗೆ, ಅವರ ಬದುಕನ್ನು ನಮಗಾಗಿ ಮೀಸಲಿಟ್ಟು ತಮ್ಮ ಮಕ್ಕಳು ಕಷ್ಟಪಡಬಾರದೆಂದು ಹಗಲಿರುಳು ದುಡಿದು ನಮ್ಮ ಬೇಡಿಕೆಗಳನೆಲ್ಲ ಈಡೇರಿಸಿ, ನಮ್ಮ ಎಲ್ಲ ತಪ್ಪುಗಳನ್ನು ಕ್ಷಮಿಸಿ ಎದೆಗೊತ್ತಿಕೊಂಡು, ನಮಗೆ ಜ್ವರ ಬಂದರೆ ತಮಗೇ ಬಂದಂತೆ ಅನುಭವಿಸಿ, ನಮಗೆ ನೋವಾದರೆ ತಾವೇ ಅನುಭವಿಸಿದ ಅವರ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡು, ಶಕ್ತಿ ಕಳೆದುಕೊಂಡು ಕೂತ ಅವರಿಗೆ ನಮ್ಮ ಪ್ರೀತಿಯೇ ಬಲ ಕೊಟ್ಟು. ಅವರನ್ನು ಮಕ್ಕಳಂತೆ ಭಾವಿಸಿ ಆರೈಕೆ ಮಾಡಿ, ನಮ್ಮೆಲ್ಲ ಅಗತ್ಯಗಳನ್ನು ಪೂರೈಸಿದ ಅವರಿಗೆ ಅವರ ಅಗತ್ಯಗಳನ್ನು ನಾವು ಅರಿತುಕೊಂಡು ಅದನ್ನು ಪೂರೈಸಿ. ಅವರು ನಮಗಾಗಿ ಎಷ್ಟೆಲ್ಲ ಮಾಡಿದರೂ, ಅವರಿಗಾಗಿ ನಮ್ಮ ಜೀವವನ್ನು ಒತ್ತೆಯಿಟ್ಟರೂ ಅವರ ಋಣವನ್ನ ತೀರಿಸಲಾರೆವು. ಆ ಋಣದ ಮಾತು ಹಾಗಿರಲಿ. ಇಳಿವಯಸ್ಸಿನ ಆ ಜೀವಕ್ಕೆ ಒಂದಷ್ಟು ಪ್ರೀತಿಯ ನುಡಿಮುತ್ತುಗಳನ್ನು ಕೊಟ್ಟು, ಅವರ ಆರೈಕೆಯನ್ನು ಮಾಡಿದ್ದರೇ, ಅವರ ಇಟ್ಟ ನಂಬಿಕೆಗೆ, ಪ್ರೀತಿಗೆ, ನಮ್ಮ ಬದುಕು ಸಾರ್ಥಕವಾಗುವುದಿಲ್ಲವೇ.
ನಾನು ನನ್ನ ೧೬-೧೭ನೆ ವಯಸ್ಸಿನಲ್ಲಿ ಸಂದರ್ಭ ಕೆಲಕಾಲ ವೃದ್ಧಾಶ್ರಮದಲ್ಲಿ ಅವರನ್ನು ನೋಡಿಕೊಳ್ಳುವುದಕ್ಕಾಗಿ ನಿಯೋಜಿಸಲ್ಪಟ್ಟಿದ್ದೆ. ನಿಜಕ್ಕೂ ಎಂತಹ ಕಠೋರ ಮನಸ್ಸ್ಸಿನವರಾಗಿದ್ದರು ಅವರ ಹೆತ್ತ ಮಕ್ಕಳು ಎಂದು ಅನಿಸುತ್ತಿತ್ತು. ತಮ್ಮ ಮಕ್ಕಳ ಮೇಲಿನ ಅವರ ಹಂಬಲಿಕೆ. ಕಣ್ಣೀರು ಎಲ್ಲವನ್ನು ಹತ್ತಿರದಿಂದ ನೋಡಿ ನನ್ನ ಮನಸ್ಸು ಮಮ್ಮಲ ಮರುಗಿತ್ತು. ನನ್ನನ್ನು ಒಬ್ಬ ೯೬ ವರ್ಷದ ಅಜ್ಜಿ ನನ್ನ ತೊಡೆಯ ಮೇಲೆ ಮಲಗಿ ಉಸಿರುಬಿಟ್ಟಾಗ ತಲ್ಲಣಿಸಿ ಹೋಗಿದ್ದೆ. ನಮಗೂ ಇದೆ ಗತಿ ನಾಳೆ ಬಾರದೆ ಇರಲಾರದು ಎಂದು ಆಗಲೇ ಅನಿಸತೊಡಗಿತ್ತು. ತಾನೊಂದು ಜೀವಕ್ಕೆ ಉಸಿರು ನೀಡಿ ನೋವನ್ನು ನುಂಗಿ ಭೂಮಿಗೆ ತಂದ ಆ ಜೀವ. ತಮ್ಮ ಉಸಿರುಹೋಗುವಾಗ ತಾನು ಉಸಿರು ಕೊಟ್ಟ ಜೀವ ಹತ್ತಿರ ಇಲ್ಲ ಎಂಬ ಕೊರಗು ಆ ಜೀವಕ್ಕೆ ಕಾಡಿರಬಹುದೆ?. ನಾಳೆ ನಮ್ಮ ಪರಿಸ್ಥಿತಿಯು ಹೀಗೆ ಆಗದಿರಲಿ. ವಯಸ್ಸಾದ ಜೀವಕ್ಕೆ ಎಷ್ಟೇ ಕಷ್ಟವಾದರೂ ಸರಿಯೇ ಇಳಿವಯಸ್ಸಿನಲ್ಲಿ, ನಮ್ಮ ಹೆತ್ತೊಡಲಿಗೆ ನಮ್ಮಿಂದ ಕೈಲಾದಷ್ಟು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸೋಣವೇ. ಇದು ನಮ್ಮ ಕರ್ತವ್ಯ. ಹೆತ್ತವರ ಋಣವನ್ನು ಸ್ವಲ್ಪವಾದರೂ ಕಳೆದುಕೊಳ್ಳುವ ಪ್ರಯತ್ನ ಮಾಡೋಣ ಅಲ್ಲವೇ? ...................sunita hegde

No comments:

Post a Comment